ವಿಕ್ರಮಾದಿತ್ಯ 2 - 
 
ಬಾದಾಮಿ ಚಳುಕ್ಯ ಮನೆತನದ ಅರಸು (ಸು. 733-45). ವಿಜಯಾದಿತ್ಯನ ಮಗ. ಈತ ತಂದೆಯ ಆಳಿಕೆಯ ಕಾಲದಲ್ಲಿ 710ರ ಸುಮಾರಿನಿಂದಲೇ ಯುವರಾಜಪದವಿಯಲ್ಲಿದ್ದು ಚಳುಕ್ಯ ರಾಜ್ಯದ  ಪಶ್ಚಿಮ ಭಾಗಗಳ ಆಳಿಕೆ ನಡೆಸುತ್ತಿದ್ದಂತೆ ತೋರುತ್ತದೆ. ಯುವರಾಜನಾಗಿ ದ್ದಾಗಲೇ ಸು. 730-31ರಲ್ಲಿ ಕಂಚಿಯ ಮೇಲೆ ದಂಡೆತ್ತಿಹೋಗಿ ಅಲ್ಲಿಯ ರಾಜ ಇಮ್ಮಡಿ ಪರಮೇಶ್ವರವರ್ಮನನ್ನು ಸೋಲಿಸಿದ. ಪಟ್ಟಕ್ಕೆ ಬಂದ ತರುಣದಲ್ಲಿ ಮತ್ತೊಮ್ಮೆ ಪಲ್ಲವ ರಾಜ್ಯದ ಮೇಲೆ ದಾಳಿಮಾಡಿ, ಆಗತಾನೇ ಪಲ್ಲವ ಸಿಂಹಾಸನ ಏರಿದ್ದ ಇಮ್ಮಡಿ ನಂದಿವರ್ಮನನ್ನು ಓಡಿಸಿ ಕಂಚಿಯನ್ನು ವಶಪಡಿಸಿಕೊಂಡ. ಆಗ ಕಂಚಿಯ ರಾಜಸಿಂಹೇಶ್ವರ (ಈಗಿನ ಕೈಲಾಸನಾಥ) ದೇವಾಲಯದ ಐಶ್ವರ್ಯವನ್ನು ಕಂಡು, ಅದನ್ನು ದೋಚದೆ ದೇವಸ್ಥಾನಕ್ಕೇ ಬಿಟ್ಟ ಎಂದು ಕಂಚಿಯ ಅದೇ ದೇವಾಲಯದ ಲ್ಲಿರುವ ಇವನ ಕನ್ನಡ ಶಾಸನವೊಂದು ತಿಳಿಸುತ್ತದೆ. ಇವನ ಮತ್ತು ಇವನ ಮಗ ಕೀರ್ತಿವರ್ಮನ ಶಾಸನಗಳು ಕಂಚಿ ವಿಜಯದ ಅನಂತರ ಪಾಂಡ್ಯ, ಚೋಳ, ಕೇರಳ, ಕಳಭ್ರರನ್ನೂ ಗೆದ್ದು ದಕ್ಷಿಣಾರ್ಣವದಲ್ಲಿ ಜಯಸ್ತಂಭವೊಂದನ್ನು ನೆಟ್ಟನೆಂದು ತಿಳಿಸಿದರೂ ಈ ಹೇಳಿಕೆಯ ಸತ್ಯಾಂಶ ಸ್ಪಷ್ಟವಾಗಿಲ್ಲ. ಈ ಚಳುಕ್ಯರ ಏಕೈಕ ಪ್ರಬಲ ಶತ್ರುಗಳಾಗಿದ್ದ ಪಲ್ಲವರ ಬಲವೂ ಮೊಂಡಾದಮೇಲೆ ಕಂಚಿವಿಜಯದ ಅನಂತರ ಇಮ್ಮಡಿ ವಿಕ್ರಮಾದಿತ್ಯ ಇಡೀ ದಕ್ಷಿಣ ಭಾರತದ ಅಪ್ರತಿಮ ಚಕ್ರವರ್ತಿಯಾದ. 	
			
	(ಪಿ.ಜಿ.ಬಿ.)

	ಇದರಿಂದ ತೃಪ್ತನಾದ ಇವನು ತನ್ನ ಸಾಹಸೀವೃತ್ತಿಯನ್ನು ಮುಂದುವ ರಿಸಲಿಲ್ಲ. ಸು. 739ರಲ್ಲಿ ಇವನ ಸಾಮಂತನಾಗಿ ಗುಜರಾತಿನಲ್ಲಿ ಆಳುತ್ತಿದ್ದ ಚಾಳುಕ್ಯರಾಜ ಅವನೀಜನಾಶ್ರಯ ಪುಲಕೇಶಿ ಅರಬ್ಬರ ದಾಳಿಯನ್ನು ಎದುರಿಸಿ ಹಿಮ್ಮೆಟ್ಟಿಸಿದರೂ ವಿಕ್ರಮಾದಿತ್ಯ ಈ ಸಂದರ್ಭದಲ್ಲಿ ವಿಶೇಷ ಆಸಕ್ತಿಯನ್ನು ತೋರಿದಂತೆ ಕಾಣುವುದಿಲ್ಲ. ವಿಕ್ರಮಾದಿತ್ಯನ ನಿರಾಸಕ್ತಿ ಅನೇಕ ಸಾಮಂತರ ಸ್ವಪ್ರತಿಷ್ಠೆಗೆ ಸಹಾಯಕವಾಗಿದ್ದಿರಬೇಕು. ಇದರಿಂದ ಲಾಭಪಡೆದ ರಾಷ್ಟ್ರಕೂಟ ವಂಶದ ದಂತಿದುರ್ಗ ಚಳುಕ್ಯ ರಾಜ್ಯದ ಉತ್ತರ ಭಾಗದಲ್ಲಿ ತನ್ನ ಬಲಸಂವರ್ಧನೆ ಮಾಡಿಕೊಂಡು ಮುಂದೆ ವಿಕ್ರಮಾದಿತ್ಯನ ಆಳ್ವಿಕೆಯ ಕೊನೆಯ ದಿನಗಳಲ್ಲಿ ಯುವರಾಜನಾಗಿದ್ದ ಇವನ ಮಗ ಕೀರ್ತಿವರ್ಮ ಮತ್ತೊಮ್ಮೆ ಕಂಚಿಯ ಮೇಲೆ ದಾಳಿಮಾಡಿದ. ವಿಕ್ರಮಾದಿತ್ಯನ ಜೀವನದಲ್ಲಿ ನಡೆದ ಈ ಮೂರು ಕಂಚಿ ವಿಜಯ ಗಳಿಂದಾಗಿ, ಪಟ್ಟದಕಲ್ಲಿನ ಒಂದು ಶಾಸನ ಈತನನ್ನು ಮೂಮೆ ಕಂಚಿಯನ್ ಪರಾಜಿಸಿದೋರ್ ಎಂದು ಹೊಗಳುತ್ತದೆ. ವಿಕ್ರಮಾದಿತ್ಯ ಸು.745ರಲ್ಲಿ ಮರಣಹೊಂದಿದ.

	ಹೈಹಯ ವಂಶದ ಲೋಕಮಹಾದೇವಿ ಮತ್ತು ತ್ರೈಲೋಕ್ಯ ಮಹಾದೇವಿ ಎಂಬ ಇಬ್ಬರು ಸೋದರಿಯರು ಈತನ ಪತ್ನಿಯರು. ಇವನಿಗೆ ಇಮ್ಮಡಿ ಕೀರ್ತಿವರ್ಮ ಎಂಬ ಮಗನೂ ವಿನಯವತಿ ಎಂಬ ಮಗಳೂ ಇದ್ದರು. ಕಲ್ಯಾಣ ಚಾಳುಕ್ಯ ವಂಶದ ಪರಂಪರೆಯಲ್ಲಿ ಬರುವ ಭೀಮ ಈತನ ತಮ್ಮ.

	ವಿಕ್ರಮಾದಿತ್ಯನ ಕಾಲದಲ್ಲಿ ಈತನ  ಹೆಂಡತಿಯರು ತಮ್ಮ ಹೆಸರಿನಲ್ಲಿ ಲೋಕೇಶ್ವರ (ಈಗಿನ ಸುಪ್ರಸಿದ್ಧ ವಿರೂಪಾಕ್ಷ) ಮತ್ತು ತ್ರೈಲೋಕೇಶ್ವರ ದೇವಾಲಯಗಳನ್ನು ಪಟ್ಟದಕಲ್ಲಿನಲ್ಲಿ ಕಟ್ಟಿಸಿದರೆಂದು ಶಾಸನಗಳಿಂದ ತಿಳಿಯುತ್ತದೆ.			
	*
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ